ಬೆದಕಾಟ ಬದುಕೆಲ್ಲ ಕ್ಷಣಕ್ಷಣವು ಹೊಸ ಹಸಿವು
ಅದಕಾಗಿ ಇದಕಾಗಿ ಮತ್ತೊ೦ದಕ್ಕಾಗಿ
ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ
ಕುದಿಯುತಿಹುದಾವಗ೦ ಮ೦ಕುತಿಮ್ಮ||೪||
ಈ ಪ್ರಪ೦ಚದಲ್ಲಿ ಕ್ಷಣಕ್ಷಣವೂ ಹೊಸಹೊಸ ಆಸೆಗಳ ಹಸಿವು . ಅಧಿಕಾರದಾಸೆ, ಸಿರಿಸೊಗಸುಗಳ ಬಯಕೆ ಕೀರ್ತಿವ್ಯಾಮೋಹಗಳ ದಾಹಕ್ಕೆ ಸಿಲುಕಿ ಮನಸ್ಸು ಸದಾ ಕುದಿಯುತ್ತಿರುವುದು.(ಈ ಆಶೆಗಳಿ೦ದ ಮುಕ್ತಿ ದೊರಕಿದಲ್ಲದೆ ಮನುಷ್ಯನಿಗೆ ಜೀವನದಲ್ಲಿ ಶಾ೦ತಿ ದೊರೆಯದು.
ಮನಸು ಬೆಳೆದ೦ತೆಲ್ಲ ಹಸಿವೆ ಬೆಳೆಯುವುದಯ್ಯ
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ
ಕೊನೆಯೆಲ್ಲಿ ಚಿ೦ತಿಸೆಲೊ ಮ೦ಕುತಿಮ್ಮ||೫||
ಮನಸ್ಸು ಬೆಳೆದ೦ತೆಲ್ಲ ನಮ್ಮ ಪ್ರಾಪ೦ಚಿಕ ವಿಷಯಾಸಕ್ತಿಯೂ ಬೆಳೆಯುತ್ತ ಹೋಗುವುದು.ಅದರ ಪೂರೈಕೆಗಾಗಿಯೇ ಮಾನವನು ನಾನಾ ಉಪಾಯಗಳನ್ನು ಹೂಡುವನು. ಇದಕ್ಕೆ ಕೊನೆ ಮೊದಲೆಲ್ಲಿ ಯೋಚಿಸು.
No comments:
Post a Comment
Note: Only a member of this blog may post a comment.